Monday, 13 April 2009

ಸರ್ವಜ್ಞನ ಕಾಲದ ಬಗ್ಗೆ

ಸರ್ವಜ್ಞನ ಕಾಲದ ಬಗ್ಗೆ ಈಗಿರುವ ಮಾಹಿತಿಗಳ ಪ್ರಕಾರ ಕ್ರಿ.ಶ ೧೬ನೇ ಶತಮಾನ ಅಥವ ೧೭ನೇ ಶತಮಾನದಲ್ಲಿದ್ದ. ಈತನ ಊರು ಧಾರವಾಡ. ಎರಡು ಪುಸ್ತಕಗಳಲ್ಲೂ ಸರಿಯಾದ ಮಾಹಿತಿ ಸಿಗದ ಕಾರಣ, ನಾನು ಅವನ ಕಾಲದ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂತರ್ಜಾಲದಲ್ಲಿ ಕೆಲವು ದಿನಗಳನ್ನು ಕಳೆದೆ. ಹಾಗು ನನಗೆ ಸಿಕ್ಕ ಮಾಹಿತಿಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

ಈಗಿರುವ ಅಂಶವನ್ನು ಈಗ ನಂಬೋಣ. ಹಾಗಾದರೆ ನನಗೊಂದು ಸಂದೇಹವಿದೆ. ೧೬ನೇ ಶತಮಾನದಲ್ಲಿ ಕರ್ನಾಟದಲ್ಲಿ ಆಳಿದ ರಾಜರ ಮಾಹಿತಿಗಳು ನಿಖರವಾಗಿದೆ, ಆಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಬಗ್ಗೆ ಎಲ್ಲಾ ಗೊತ್ತಿದೆ. ಅದೇ ಕಾಲದಲ್ಲಿದ್ದ ಸರ್ವಜ್ಞನ ಬಗ್ಗೆ ಮಾಹಿತಿವಿಲ್ಲ ಎಂದರೇನರ್ಥ?

ಈತನ ಕಾಲದ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿಯಿಂದ ನಾನು ಪುಟಗಳನ್ನು ತಿರುವುಹಾಕಿದಾಗ ತಿಳಿದ ವಿಷಯಗಳು

೧. ಜೈನ ಧರ್ಮದ ಬಗ್ಗೆ ಹಾಗು ತೀರ್ಥಂಕರರ (ಜಿನ) ಬಗ್ಗೆ ವಚನಗಳು
೨. ಲಿಂಗಾಯತರ ಬಗ್ಗೆ ವಚನಗಳು
೩. ಸಂಗೀತದ ಒಂದು ರಾಗದ ಬಗ್ಗೆ

೧) ಜೈನರ ಬಗ್ಗೆ ನೋಡೋಣ:-

ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು|
ಸರ್ಪನಿಗೆ ಬಾಲವೆರಡಕ್ಕು ಸವಣ ತಾ|
ತಪ್ಪಾಡಿದಂದು ಸರ್ವಜ್ಞ||

-- ಸವಣರು ಸುಳ್ಳನ್ನಾಡಿದರೆ ಉಪ್ಪು ಸಪ್ಪೆಯಾಗುತ್ತದೆ, ಕರ್ಪೂರ ಕಪ್ಪಾಗುತ್ತದೆ ಹಾಗು ಹಾವಿಗೆ ಎರಡು ಬಾಲ ಬರುತ್ತದೆ.

ನಾನು ನಿಘಂಟು ತಾತನನ್ನು ಕೇಳಿದೆ ಸವಣ ಎಂದರೆ ಏನು ಅಂತ. ಆಗ ಅವರು,
ಸವಣ = (ಸಂ. ಶ್ರಮಣ) (ನಾ) ಜೈನ ಸನ್ಯಾಸಿ, ಕ್ಷಪಣಕ ೨ ಕಿವಿ

ನನಗನಿಸಿದ್ದು, ಸರ್ವಜ್ಞ ಈ ರೀತಿಯಾಗಿ ಹೇಳಿದ್ದಾನೆಂದ ಮೇಲೆ, ಆಗ ಸವಣರು ಬದುಕಿರ ಬೇಕು ಹಾಗು ಈತನಿಗೆ ಅವರ ಬಗ್ಗೆ ತಿಳಿದಿರ ಬೇಕು. ಹತ್ತಿರದಿಂದ ಅವರನ್ನು ಕಂಡಿರಲೇ ಬೇಕು.

ಜೈನರು ಕರ್ನಾಟದಲ್ಲೂ ಇದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಶ್ರವಣಬೆಳಗೊಳದಲ್ಲಿ ಗೋಮಟೇಶ್ವರ ಇರೋದೇ ಸಾಕ್ಷಿ. ನನ್ನ ಅನಿಸಿಕೆ ಏನೆಂದರೆ, ಸವಣಕ್ಕೆ ಸಂಸ್ಕೃತ ಪದ "ಶ್ರಮಣ" -> ಇದು ಕನ್ನಡಕ್ಕೆ ಬರುವಾಗ "ಶ್ರವಣ"ವಾಗಿರಬಹುದು. ಬೆಳಗೊಳ ಪದವು ಬಿಳಿ + ಕೊಳ ದಿಂದ ಬಂದಿದೆ. ಶ್ರವಣರಿದ್ದ ಬಿಳಿ ಕೊಳವಿದ್ದ ಊರೇ ಶ್ರವಣಬೆಳಗೊಳ.

ಈ ವಚನ ಗಮನಿಸಿ:

ಮೊಸರು ಇಲ್ಲದ ಊಟ| ಪಸರವಿಲ್ಲದ ಕಟಕ|
ಹಸನವಿಲ್ಲದಳ ರತಿಕೂಟ ಜಿನನ ಬಾಯ್|
ಕಿಸುಕುಳದಂತೆ ಸರ್ವಜ್ಞ||

ಮತ್ತೆ ನಿಘಂಟು ತಾತನನ್ನು ಕೇಳಿದೆ,
ಜಿನ: (ಸಂ) (ನಾ) ೧ ಇಂದ್ರಿಯಗಳನ್ನು ಗೆದ್ದವನು, ಜಿತೇಂದ್ರಿಯ ೨ ಜೈನ ಯಾ ಬೌದ್ಧ ಸನ್ಯಾಸಿ ೩ ಬುದ್ಧ ೪ ವಿಷ್ಣು ೫ ಅರ್ಹಂತ ೬ ಇಪ್ಪತ್ನಾಲ್ಕು ಎಂಬ ಸಂಖ್ಯೆಯ ಸಂಕೇತ

ಜೈನ ಧರ್ಮದಲ್ಲಿ ೨೪ ಸಂಖ್ಯೆ ಏನನ್ನು ಜ್ಞಾಪಿಸುತ್ತದೆ? (೨೪ನೇ ತೀರ್ಥಂಕರ (ಜಿನ)) ಅಂದರೆ ಮಹಾವೀರ. ಮಹಾವೀರನ ಕಾಲ ಕ್ರಿ. ಪೂ. ೬ನೇ ಶತಮಾನ. ಇಲ್ಲಿ ಸರ್ವಜ್ಞ ನೇರವಾಗಿ ಮಹಾವೀರನಿಗೆ ಹೇಳಿರ ಬಹುದಲ್ಲವೆ? ಹಾಗಾಗಿ ಸರ್ವಜ್ಞ ಕ್ರಿ.ಪೂ. ೬ನೇ ಶತಮಾನದವನು ಎನ್ನ ಬಹುದಲ್ಲವೆ?

೨) ಈಗ ಲಿಂಗಾಯತರ ವಿಷಯ ನೋಡೋಣ:-

ಲಿಂಗಾಯತ ಧರ್ಮ ಕೂಡ ಹಳೆಯದೆ. ಇದನ್ನು ಹೆಚ್ಚು ಪ್ರಚಾರ ಮಾಡಿದವರು ಬಸವಣ್ಣ ಹಾಗು ಅವರ ಕಾಲದಲ್ಲಿದ್ದ ಅಲ್ಲಮ ಪ್ರಭು, ಅಕ್ಕಮಹಾದೇವಿ. ಇವರ ಕಾಲ ೧೨ನೇ ಶತಮಾನ. ಈ ಧರ್ಮ ೧೨ನೇ ಶತಮಾನಕ್ಕಿಂತ ಹಿಂದಿನದು. ಇದಕ್ಕೆ ಎರಡು ಸಾಕ್ಷಿಗಳನ್ನು ನೋಡೋಣ.
೧. ಲಿಂಗಾಯತರ ಧರ್ಮ ಗ್ರಂಥ "ಸಿದ್ಧಾಂತ ಶಿಖಾಮಣಿ" ರಚಿತವಾಗಿರೋ ಕಾಲ - ೮ನೇ ಶತಮಾನ
೨. ಲಿಂಗಾಯತರ ಮಠ- ಜಂಗಮವಾದಿ ಮಠವು ಕಾಶಿಯಲ್ಲಿದ್ದು ೬ನೇ ಶತಮಾನದ್ದು ಎಂಬ ದಾಖಲೆ ಇದೆ.
ಇದರಿಂದ ಸರ್ವಜ್ಞನು ಆ ಕಾಲದಲ್ಲೇ ಇದ್ದಿರಬಹುದು ಎಂದು ಹೇಳ ಬಹುದಲ್ಲವೆ?

೩) ಸಂಗೀತದ ರಾಗದ ಕುರಿತಾಗಿ:-

ನಾಟ ರಾಗವು ಲೇಸು| ತೋಟ ಮಲ್ಲಿಗೆ ಲೇಸು|
ಕೂಟವದು ಲೇಸು ಹಿರಿಯರೊಳು ಶಿವನ ಅರಿ|
ದಾಟವೇ ಲೇಸು ಸರ್ವಜ್ಞ||

(ನಾನು refer ಮಾಡುತ್ತಿದ್ದ ಎರಡೂ ಪುಸ್ತಕಗಳಲ್ಲಿ "ನಾಟ ರಾಗ"ದ ವಿಷಯವೇ ಬರೆದಿಲ್ಲ.)

ನಮ್ಮ ಪುರಂದರದಾಸರನ್ನು "ಸಂಗೀತದ ಪಿತಾಮಹ" ಅಂತ ಕರೆಯುವುದು ಬಹುಶಃ ಎಲ್ಲರಿಗೂ ತಿಳಿದಿರುತ್ತದೆ. ಅವರ ಕಾಲ ೧೫ನೇ ಶತಮಾನ. ಹೀಗಿದ್ದರೂ ಸರ್ವಜ್ಞನ ಕಾಲ ೧೫ನೇ ಶತಮಾನ ಎನ್ನಲಾಗುವುದಿಲ್ಲ. ಏಕೆಂದರೆ ಸಂಗೀತದ ಕುರಿತಾದ ಮಾಹಿತಿಗಳು ನಮ್ಮ ಸಾಮವೇದದಲ್ಲೇ ಇತ್ತು.( ಐದು ಸಾವಿರ ವರ್ಷಗಳ ಹಿಂದೆ). ಪುರಂದರ ದಾಸರು ಸಂಗೀತವನ್ನು ಕಲಿಯಲು ಸುಲಭವಾಗಲೆಂದ "Syllabus" ಮಾಡಿದ್ದಾರೆ. ಪುರಂದರ ದಾಸರು ಇದನ್ನು ಕಂಡು ಹಿಡಿದಿಲ್ಲ.
LKG -> ಸ....ಪಾ..........ಪಾ....ಸ...........
UKG -> ಸರಳವರಸೆ,
1st Std -> ತಾರ ಸ್ಥಾಯಿ ಹಾಗು ಮಂದ್ರ ಸ್ಥಾಯಿ
2nd Std -> ಜಂಟಿವರಸೆ ಇತ್ಯಾದಿಗಳು.

ತ್ಯಾಗರಾಜರು ತಮ್ಮ ಪಂಚರತ್ನ ಕೀರ್ತನೆಗಳಲ್ಲಿ ಮೊದಲನೆಯದನ್ನು ನಾಟ ರಾಗದಲ್ಲೇ ಮಾಡಿರುವುದು ಸತ್ಯ. ಅಲ್ಲದೆ ನಾಟ ರಾಗವು ಸಾವಿರ ವರ್ಷಕ್ಕೂ ಹಳೆಯ ರಾಗ ಎನ್ನುವುದಕ್ಕೆ ಮಾಹಿತಿಯಿದೆ. ಸರ್ವಜ್ಞನಿಗೆ ಅಂದಿನವರು ಯಾರೋ ನಾಟ ರಾಗದ ಬಗ್ಗೆ ಹೇಳಿ ಅದನ್ನು ವಚನದಲ್ಲಿ ಬರೆದಿರಬಹುದು. ನಾಟ ರಾಗವು ಶ್ರೇಷ್ಠವಾದ ರಾಗವಾದ್ದರಿಂದ ತ್ಯಾಗರಾಜರು ಆ ರಾಗದಲ್ಲಿ ಕೀರ್ತನೆ ಮಾಡಿದ್ದಾರೆ ಎನ್ನ ಬಹುದು.

ಎಂ.ಎಸ್.ಸುಬ್ಬಲಕ್ಷ್ಮಿಯವರು ಹಾಡಿರುವ ಹಾಡು ಇಲ್ಲಿ ಕೇಳಬಹುದು:ಇಷ್ಟೆಲ್ಲಾ ಸಂಶೋಧನೆ ಮಾಡಿದರೂ ನಿಖರವಾದ ಮಾಹಿತಿ ನನಗೆ ಸಿಕ್ಕಿಲ್ಲ. ಈಗ ನಿಮ್ಮ ಮುಂದೆ ಇಡುತ್ತಿದ್ದೇನೆ. ಚರ್ಚೆಗೆ ಆಹ್ವಾನಿಸುತ್ತಿದ್ದೇನೆ.

--
ಈ ಪೋಸ್ಟ್ ಬರೆದ ಮೇಲೆ, ಶ್ರೀ ಸವಿತೃ ಅವರು, ಒಂದು ವಚನವನ್ನು ಕಾಮೆಂಟ್ ಮಾಡಿದರು. ಅವರು ಕೊಟ್ಟ ಮಾಹಿತಿ ಕಾಮೆಂಟಿನಲ್ಲೂ ಇದೆ. ಇಲ್ಲೂ ಹಾಕುತ್ತೇನೆ.
ಸರ್ವಜ್ಞನು ಬಸವಾದಿ ಶರಣರ ನಂತರದ ಕಾಲದವನು ಅಂತ ತಜ್ಞರ ಅನಿಸಿಕೆ.

೧.ಆತ ಕೆಲವು ಕಡೆ ಶರಣರ ಹೆಸರನ್ನು refer ಮಾಡಿದ್ದಾನೆ.

ಉದಾ.

ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ

೨. ಶರಣ ಪದ ಸಿದ್ದಾಂತ ಶಿಖಮಣಿಯಲ್ಲಿ / ಶೈವಾಗಮಗಳಲ್ಲಿ ಬಂದಿದ್ದರೂ "ಶರಣರು" ಅನ್ನೋ ಕಾನ್ಸೆಪ್ಟ್ ಬಂದಿದ್ದು ಬಸವಾದಿ ಶರಣರ ನಂತರವೆ. ಅದಕ್ಕೂ ಮುಂಚಿನವರನ್ನು ಪುರಾತನರು ಅಂತ ಸಂಭೋಧಿಸುತ್ತಾರೆ.

ಈ ಮಾಹಿತಿಯಿಂದ ಆತ ಕ್ರಿ.ಪೂ ದವನು ಅನ್ನೋದು ಸುಳ್ಳು. ಬಸವಣ್ಣನ ಸಮಕಾಲೀನ ಅಥವಾ ನಂತರದವನು ಅನ್ನ ಬಹುದು.

ವಂದನೆಗಳು ಸವಿತೃಅವರೆ.

12 comments:

shivu said...

ಜಯಶಂಕರ್,

ನಿಜಕ್ಕೂ ಈಗ ನಿಮ್ಮ ಬ್ಲಾಗಿಗೆ ಒಂದು ಸುಂದರ ಸಂಸ್ಕಾರ ಬಂತು....ಸರ್ವಜ್ಞ, ಜೈನಧರ್ಮ ವಚನ, ಲಿಂಗಾಯಿತ ಧರ್ಮದ ವಚನ, ಪದಗಳ ಬಳಕೆ ಇತ್ಯಾದಿಗಳನ್ನು ತುಂಬಾ ಚೆನ್ನಾಗಿ ಕಲೆಹಾಕಿದ್ದೀರಿ....

ಇಂಥ ವಿಚಾರಗಳಲ್ಲಿ ನಿಮ್ಮ ಶ್ರಮಕ್ಕೆ ಖಂಡಿತ ಪುಣ್ಯ ಲಭಿಸುತ್ತದೆ...

ಧನ್ಯವಾದಗಳು..

ಅಂತರ್ವಾಣಿ said...

ಶಿವಣ್ಣ
ವಂದನೆಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸಂಗ್ರಹಯೋಗ್ಯ ಮಾಹಿತಿಯನ್ನು ಕೊಟ್ಟಿರುವಿರಿ.ಧನ್ಯವಾದಗಳು.

ಅಂತರ್ವಾಣಿ said...

ಮಲ್ಲಿಕಾರ್ಜುನ ಅವರೆ,
ವಂದನೆಗಳು.
ಬರುತ್ತಿರಿ.

Girish Chandra said...

ಪ್ರೀತಿಯ ಅಂತರ್ವಾಣಿ,

ನಿಮ್ಮ ಮಾಹಿತಿ ಚೆನ್ನಾಗಿದೆ, ಆದ್ರೆ "ಈಗಿರುವ ಮಾಹಿತಿಗಳ ಪ್ರಕಾರ ಕ್ರಿ.ಶ. ೧೬-೧೭ ಶತಮಾನದಲ್ಲಿದ್ದ" ಅಂತ ಹೇಗ್ ಹೇಳಕ್ಕಾಗುತ್ತೆ ಗೊತ್ತಿಲ್ಲ. ಇದು ಆ ೨ ಪುಸ್ತಕದಲ್ಲಿದ್ದ ಮಾಹಿತಿಯೇ, ಅಥವ ನಿಮ್ಮ ಅನುಮಾನವೇ?

೧) ಮಹಾವ್ವೀರರ ಬಗ್ಗೆ ಹೇಳ್ತಾ ನೀವು "ಸರ್ವಜ್ಞ ಕ್ರಿ.ಪೂ. ೬ನೇ ಶತಮಾನದವನು ಎನ್ನ ಬಹುದಲ್ಲವೆ?" ಅಂತ ಹೇಳ್ತೀರಾ! ಆದ್ರೆ, ಮಹಾವೀರನ ಕಾಲದವನು ಅಂತ ಹೇಳಕ್ಕಾಗಲ್ಲ ಅಲ್ವೆ? "ಧರ್ಮರಾಜ ಬಾಯಲ್ಲಿ ಸುಳ್ಳು ಬಂದಂತೆ" ಅಂತ ಉಪಯೋಗಿಸಿದರೆ, ಮಹಾಭಾರತದ ಸಮಯದವನು ಅಂತ ಹೇಳೋ ಹಾಗೆ ಆಗಲ್ವೇ ಅಂತ ನನ್ನ ಕಿಸಿವಿಸಿ ಅಷ್ಟೆ.

೨) ಸರ್ವಜ್ಞನು ಲಿಂಗಾಯತ ಧರ್ಮದವನು ಅಂತ ಹೇಗೆ ಹೇಳುತ್ತೀರಾ? ಲಿಂಗಾಯತರದೂ ಸಾಕಷ್ಟು ಮಟ್ಟಿಗೆ ಸನಾತನ ಧರ್ಮವೇ - ಕಲಾನುಕಾಲದಿಂದ ಬಂದಿರೋದು - ಅನ್ನಬಹುದೇನೊ ಗೊತ್ತಿಲ್ಲ (ನಾನು ಸೊಂಷೋದನೆ ಮಾಡಿಲ್ಲ). ಆದ್ರೂ, ಇವನು ಲಿಂಗಾಯತ ಅಂತ ತಿಳಿದರೂ, ಬಸವಣ್ಣನವರೇ ೧೨ನೇ ಶತಮಾನದವರು ಅಂದಮೇಲೆ, ಆದ್ರೆ ಸರ್ವಜ್ಞ ಬಸವಣ್ನನವರಿಗಿಂತ ಮುಂಚಿನವನು ಅಂತನಾಗ್ಲೀ, ಆಮೇಲಿನವನು ಅಂತಾಗ್ಲೀ ಹೇಳಕ್ಕೆ ಏನಾದ್ರೂ ಮಾಹಿತಿ ಇದ್ಯೆ? ನನ್ಗೆ ಗೊತ್ತಿಲ್ಲ!

೩) ನಾಟ ರಾಗಕ್ಕೆ ಒಂದು ನಿಖರವಾದ ಕಾಲವನ್ನ ಹಾಕೋದು ಸಾಧ್ಯವೇ ಇಲ್ಲವಾದ್ದರಿಂದ ಇದನ್ನೂ ನಾವು ಕಾಲವನ್ನ ಊಹಿಸೋಕ್ಕೆ ಬಳೆಸಲು ಸಾಧ್ಯವಿಲ್ಲ. ಈಗಲೂ ಕೂಡ ನಾನು ಒಂದು ಪಧ್ಯದಲ್ಲಿ ನಾಟರಾಗದ ಬಗ್ಗೆ ಬರೆಯ ಬಹುದು, ಅಥವ ಇಂದಿನಿಂದ ೫೦೦೦ ವರ್ಷದ ನಂತರವೂ ಯಾರೋ ಒಬ್ಬರು ಬರೆಯಬಹುದು ಅಲ್ಲವೆ?

ಇಷ್ಟೆಲ್ಲಾ ಠೀಕೆ ಮಾಡಿದರೂ ನಿಮ್ಮ ಮಾಹಿತಿ ಸಂಷೋಧನೆ ಮತ್ತು ಇಲ್ಲಿ ಈ ವಿಷಯಗಳ ಬಗ್ಗೆ ಬರೆದಿದ್ದಕ್ಕೆ ಚಿರಋಣಿ ... ತುಂಬಾ ಧನ್ಯವಾದಗಳು ... ತುಂಬಾ ಒಳ್ಳೆಯ ಕೆಲ್ಸ ಮಾಡ್ತಾ ಇದೀರಾ, ಮುಂದುವರೆಸಿ ... ನಮ್ಮೆಲ್ಲರ ಪ್ರೋತ್ಸಾಹವಿರುತ್ತೆ ಯಾವಾಗ್ಲೂ ...

ಪ್ರೀತಿಯ,
ಗಿರೀಶ್

ಅಂತರ್ವಾಣಿ said...

ಪ್ರೀತಿಯ ಭಾವ,
ಮೊದಲಿಗೆ ಧನ್ಯವಾದಗಳು. ಚರ್ಚೆಯ ಆಹ್ವಾನ ಸ್ವೀಕರಿಸಿ ಸ್ಪಂದಿಸಿದ್ದಕ್ಕೆ.

ಪುಸ್ತಕದ ಮಾಹಿತಿ ( ಹಾಗು ವಿಕಿಪಿಡಿಯ) ಪ್ರಕಾರ ೧೬-೧೭ ಶತಮಾನ ಅಂತ ಓದಿದ್ದೆ.
ನಾನು ಕೊನೆಯಲ್ಲಿ ಹೇಳಿದ್ದೇನೆ, "ನಿಖರವಾದ ಮಾಹಿತಿ ಸಿಗಲಿಲ್ಲವೆಂದು."

ನಿಮ್ಮ ಸಂದೇಹಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ.
೧. ಮಹಾವೀರ:
ನಿಜ. ಕ್ರಿ.ಪೂ ದವರ ಬಗ್ಗೆ ನಿಖರವಾಗಿ ಹೇಳೋಕೆ ಆಗಲ್ಲ. ಊಹೆ ಮಾಡುತ್ತೇವೆ ಅಷ್ಟೆ.

೨. ಲಿಂಗಾಯತ:

ಸರ್ವಜ್ಞನು ಲಿಂಗಾಯತ ಧರ್ಮದವನು ಅಂತ ನಾನು ಹೇಳಿಲ್ಲ. ಲಿಂಗಾಯತ ಧರ್ಮದ ಬಗ್ಗೆ ಬರೆದಿರುವ ವಚನಗಳಿವೆ ಅಷ್ಟೆ. ನಾನು ಇದನ್ನು ಬರೆಯುವ ಉದ್ದೇಶ, ಅನೇಕರು ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ ಅಂತ ನಂಬಿರುವ ಸಾಧ್ಯತೆಯಿದೆ. ನಾನು ಇಲ್ಲಿ ತೋರ ಬಯಸಿರೋ ವಿಷಯ..ಸರ್ವಜ್ಞನು ಅದಕ್ಕಿಂತ ಹಿಂದೆ ಇದ್ದಿರ ಬಹುದೆಂದು.

೩. ನಾಟ ರಾಗ:

ಇಲ್ಲಿ ನನ್ನ ಊಹೆ ಏನೆಂದರೆ.. ಸರ್ವಜ್ಞನು ಪುರಂದರ ದಾಸರಿಗಿಂತ ಹಿಂದಿನವನು ಎಂಬುದು.

ಕೊನೆದಾಗಿ, ಈ ರೀತಿ ಠೀಕೆಗಳಿಗೆ ಸ್ವಾಗತ. ಇದರಿಂದ ನನಗೆ ಮತ್ತಷ್ಟು ಸಂಶೋಧನೆ ಮಾಡುವ ಹಮ್ಮಸ್ಸು ಬರುತ್ತದೆ.

ನಿಮ್ಮವ,
ಶಂಕ್ರು

ಸಿಮೆಂಟು ಮರಳಿನ ಮಧ್ಯೆ said...

uttama maahiti koTTiddakkaagi..
dhanyavaadagaLu...

SavithRu said...

ಸರ್ವಜ್ನ ಬಸವಾದಿ ಶರಣರ ನಂತರದ ಕಾಲದವನು ಅಂತ ತಜ್ನರ ಅನಿಸಿಕೆ.

೧.ಆತ ಕೆಲವು ಕಡೆ ಶರಣರ ಹೆಸರನ್ನು refer ಮಾಡಿದ್ದಾನೆ.

ಉದಾ.

ಬಸವೆನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ನ


೨. ಶರಣ ಪದ ಸಿದ್ದಾಂತ ಶಿಖಮಣಿಯಲ್ಲಿ / ಶೈವಾಗಮಗಳಲ್ಲಿ ಬಂದಿದ್ದರೂ "ಶರಣರು" ಅನ್ನೋ ಕಾನ್ಸೆಪ್ಟ್ ಬಂದಿದ್ದು ಬಸವಾದಿ ಶರಣರ ನಂತರವೆ. ಅದಕ್ಕೂ ಮುಂಚಿನವರನ್ನು ಪುರಾತನರು ಅಂತ ಸಂಭೋಧಿಸುತ್ತಾರೆ.

ಸರ್ವಜ್ನನ ಹುಟ್ಟೂರು ಅಂಬಲೂರು (ಈಗ ಅಬಲೂರು). ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನಲ್ಲಿದೆ. ಮತ್ತು ನಾನು ಈ ಗ್ರಾಮಕ್ಕೆ ಭೇತಿ ಕೊಟ್ಟಿದ್ದೇನೆ. ಇಲ್ಲಿ ಸುಮಾರು ೧೨ ನೆ ಶತಮಾನದ್ದೆನ್ನಬಹುದಾದ ಚೋಳ ರಾಜರು ಕಟ್ಟಿಸಿದ್ದ ಬಸವನ ದೇವಸ್ಥಾನವಿದೆ. ಒಮ್ಮೆ ಬಿಡುವಾದಾಗ ಫೋಟೋ ಸಮೇತ ಒಂದು ಬ್ಲಾಗು ಬರೆಯಲು ಪ್ರಯತ್ನಿಸುತ್ತೇನೆ.

ಅಂತರ್ವಾಣಿ said...

ಸವಿತೃ ಅವರೆ,
ಧನ್ಯವಾದಗಳು. ನೀವು ಹಾಕಿರುವ ಈ ವಚನದಿಂದ ಸರ್ವಜ್ಞನು ಬಸವಣ್ಣನ ಸಮಕಾಲೀನವನಾಗಿರ ಬಹುದು ಅಥವಾ ನಂತರದವನು ಎಂದು ತಿಳಿಯುತ್ತೆ.

ನೀವು ಕೊಟ್ಟ ಮಾಹಿತಿಗೆ ಧನ್ಯವಾದಗಳು.

ಗಿರಿ said...

uttama vicharadhaare hagU amaahiti prastuta paDisidderi...

thanks
-giri

ಅಂತರ್ವಾಣಿ said...

ಗಿರಿ ಅವರೆ,
ವಂದನೆಗಳು

AntharangadaMaathugalu said...

ಉತ್ತಮವಾದ ಲೇಖನಗಳ ಬ್ಲಾಗ್ ನಿಮ್ಮದು... ಅಭಿನಂದನೆಗಳು... ಸಂಗೀತದ ಬಗ್ಗೆ ನನಗ ತಿಳಿದಿರುವ ಅಲ್ಪ ಸ್ವಲ್ಪವನ್ನು ನೀವು ನನ್ನ ಬ್ಲಾಗ್ನಲ್ಲೂ ನೋಡಬಹುದು...

http://antharangadamaathugalu.blogspot.com/

ಶ್ಯಾಮಲ