Thursday 29 October 2009

ಜ್ಞಾನದ ಬಗ್ಗೆ

ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|
ಜ್ಞಾನವೇ ಮೇಲು ಸರ್ವಜ್ಞ||


ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|
ಹಾನಿ ಕಾಣಯ್ಯ ಸರ್ವಜ್ಞ||

- ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗು ಪರಲೋಕದಲ್ಲಿ ಮುಕ್ತಿ ದೊರೆಯುವುದು. ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಲಕ ವಸ್ತುಗಳೂ ವ್ಯರ್ಥ!

ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|
ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾ
ಬಿತ್ತು ಲೇಸೆಂದ ಸರ್ವಜ್ಞ||

- ನಾವು ಎಲ್ಲೇ ಹೋದರು ಅಲ್ಲಿ ನಮ್ಮ ಮನಸ್ಸು ಬರುವುದು. ಅಂದರೆ ಜ್ಞಾನ. ಅದು ಯಾರಿಂದಲೂ ಕದಿಯಲಸಾಧ್ಯವಾದ ವಸ್ತು.

Sunday 19 July 2009

ಕುಲದ ಕುರಿತು - ೧

ಕುಲ ಎನ್ನುವ ಪದ ಕೇಳಿದರೆ, ಕನಕದಾಸರು ರಚಿಸಿರುವ,
"ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ?" ನೆನಪಾಗುತ್ತೆ. ಸರ್ವಜ್ಞನೂ ಕೂಡ ಈ ಕುಲದ ಬಗ್ಗೆ ತನ್ನ ಹಲವು ವಚನಗಳಲ್ಲಿ ಹೇಳಿದ್ದಾನೆ.

ಹೊಲಸು ಮಾಂಸದ ಹುತ್ತ| ಎಲುವಿನಾ ಹಂದರವು|
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ|
ಕುಲವನರಸುವರೇ ಸರ್ವಜ್ಞ||

ಎಲುವಿನೀ ಕಾಯಕ್ಕೆ| ಸಲೆ ಚರ್ಮದ ಹೊದಿಕೆ|
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ|
ಕುಲವಾವುದಯ್ಯ ಸರ್ವಜ್ಞ||

ಮಾಸಿನೊಳು ಮುಸುಕಿರ್ದ| ಮೂಸಬದುದಾಸನದಿ|
ಹೇಸಿಕೆಯ ಮಲವು ಸೂಸುವುದ ಕಂಡ ಕುಲ|
ದಾಶೆಯನು ಬಿಡರು ಸರ್ವಜ್ಞ||

Saturday 27 June 2009

ದೇವರನ್ನು ಕುರಿತು - ೨


[ಬಹಳ ದಿನಗಳ ಕಾಲ ಪೋಸ್ಟ್ ಮಾಡಲು ಸಮಯ ಸಿಕ್ಕಿರಲಿಲ್ಲ. ಈ ದಿನ ಮಾಡುತ್ತಿದ್ದೇನೆ. ಇನ್ನು ಮುಂದೆ ಸಕಾಲಕ್ಕೆ update ಮಾಡುತ್ತೇನೆಂದು ಭಾವಿಸಿದ್ದೇನೆ. ನೋಡೋಣ ಕಾಲ ಏನು ಮಾಡುತ್ತೆ ಅಂತ.]

ಈಗ ದೇವರನ್ನು ಕುರಿತಾಗಿ ಬರೆದ
ಮತ್ತಷ್ಟು ವಚನಗಳು ನೋಡೋಣ.

ಕ್ಷೀರದೊಳು
ಘೃತವಿರಲು| ನೀರಿನಲ್ಲಿ ಸಿಲ್ಕಿಹುದು|
ಆರಿಗೆ ತೋರದಂತೆ ತನ್ನೊಳಗೆ|
ಸಾರಿಹನು ಶಿವನು ಸರ್ವಜ್ಞ||

- ಹಾಲಿನಲ್ಲಿ ಹೇಗೆ ತುಪ್ಪವು, ನೀರಿನಲ್ಲಿ ಕಸವು ಇದ್ದರೂ ಬರಿಗಣ್ಣಿಕೆ ಕಾಣಿಸುವುದಿಲ್ಲವೋ ಹಾಗೆ ದೇವರು ಮಾನವರ ಶರೀರದಲ್ಲಿ ಇದ್ದರೂ ನಮಗೆ ಕಾಣಿಸುವುದಿಲ್ಲ.

ಮನದಲ್ಲಿ ನೆನೆವಿರಲು| ತನುವೊಂದು ಮಠವಕ್ಕು|
ಮನಹೋಗಿ ಹಲವ ನೆನೆದಿಹರೆ ಅದು ಹಾಳು|
ಮನೆಯೆಂದು ತಿಳಿಯೋ ಸರ್ವಜ್ಞ||

- ಇದರಲ್ಲಿ ಹೇಳುವ ವಿಷಯ ಏನೆಂದರೆ, ಮನಸ್ಸಿನಲ್ಲಿ ದೇವರನ್ನು ನೆನೆಯಿರಿ ಸಾಕು, ಆಗ ನಮ್ಮ ದೇಹವೇ ಭಗವಂತ ನೆಲೆಸಿರುವ ಗುಡಿಯಾಗುವುದು. ಏಕಾಗ್ರತೆಯಿಲ್ಲದ ದೇವರನ್ನು ನೆನೆದರೆ ಆಗ ನಮ್ಮ ದೇಹವು ಗುಡಿಯಾಗಿರುವುದಿಲ್ಲ ಬದಲಿಗೆ ಹಾಳು ಬಿದ್ದ ಮನೆಯಾಗಿರುತ್ತದೆ.

ದೇಹ ದೇವಾಲಯವು| ಜೀವವೇ ಶಿವಲಿಂಗ|
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿ ಸಂ|
ದೇಹವಿಲ್ಲೆಂದ ಸರ್ವಜ್ಞ||

- ನನ್ನಲ್ಲೇ ದೇವರಿದ್ದಾರೆ, ಬೇರೆಲ್ಲೂ ಹುಡುಕುವುದು ಬೇಡ. ಅವನನ್ನು ನೆನೆದರೆ ಮುಕ್ತಿ ಸಿಗುವುದು ಎಂದು ಸರ್ವಜ್ಞ ನುಡಿದಿದ್ದಾನೆ. ಬಸವಣ್ಣನವರ ವಚನ: "ಎನ್ನ ಕಾಲೆ ಕಂಬ, ದೇಹವೆ ದೇಗುಲ, ಶಿರವೇ ಹೊನ್ನ ಕಳಶ..."ಕೂಡ ಇದನ್ನೇ ಹೇಳುತ್ತದೆ.

Friday 1 May 2009

ದೇವರನ್ನು ಕುರಿತು...

ಸರ್ವಜ್ಞನ ಬಹುತೇಕ ವಚನಗಳು ದೇವರ ಬಗ್ಗೆ, ಗುರುಗಳ ಬಗ್ಗೆ ಹಾಗು ನಮಗೆ ಸ್ವಲ್ಪ ಬುದ್ಧಿವಾದ ಸಾರುವ ವಿಷಯಗಳನ್ನು ಒಳಗೊಂಡಿದೆ. ಮೊದಲಿಗೆ ದೇವರನ್ನು ಕುರಿತಾದ ಕೆಲವು ವಚನಗಳನ್ನು ನೋಡೋಣ.

ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ|
ಬಣ್ಣಿಸಿ ಬರೆದ ಪಟದೊಳಗೆಯಿರುವಾತ|
ತನ್ನೊಳಗೆ ಇರನೇ ಸರ್ವಜ್ಞ||

- ಮರಳಿನ ಕಣದಲ್ಲಿಯೂ, ದೊಡ್ಡ ಶಿಲೆಯಲ್ಲಿಯೂ, ಮನೆಯಲ್ಲಿರುವ ಚಿತ್ರಪಟದಲ್ಲಿಯೂ ದೇವರು ಇದ್ದಾನೆಂದ ಮೇಲೆ, ನಮ್ಮ ದೇಹದಲ್ಲಿ ಅವನು ಇರೋದಿಲ್ಲವೇ? ಅಂತ ಸರ್ವಜ್ಞ ಕೇಳುತ್ತಿದ್ದಾನೆ.

ವಾರಣಾಸಿಗೆ ಹೋಗುವ| ಕಾರಣವೇನಯ್ಯಾ|
ಕಾರಣ ಪುರುಷನೊಳಗಿರಲು ಅಲಿವುದಕೆ|
ಕಾರಣ ಹೇಳು ಸರ್ವಜ್ಞ||

- ಕಾರಣ ಪುರುಷ ಅಂದರೆ ಆ ಪರಮಾತ್ಮನು ನಮ್ಮೊಳಗೇ ಇರುವಾಗ, ನಾವು ಅವನ ದರ್ಶನಕ್ಕೆ ಕಾಶಿಗೆ ಹೋಗುವೆ ಕಾರಣವಾದರೂ ಏನಿದೆ? ಅಂದರೆ ದೇವರು ನಮ್ಮೊಳಗೆ ಇದ್ದಾನೆ. ಅಂದ ಮೇಲೆ ದೇವಸ್ಥಾನಗಳಿಗೆ ಹೋಗುವ ಕಾರಣವೇನಿದೆ ಎಂಬುದು ಅವರ ಪ್ರಶ್ನೆ.

ಇದೇ ಅರ್ಥ ಬರುವ ಮತ್ತೊಂದು ವಚನ:

ಮನದಲ್ಲಿ ನೆನೆವಂಗೆ| ಮನೆಯೇನು ಮಠವೇನು?
ಮನದಲ್ಲಿ ನೆನೆಯದಿರುವವನು|ದೇಗುಲದ
ಕೊನೆಯಲ್ಲಿದ್ದೇನು ಸರ್ವಜ್ಞ||

- ದೇವರನ್ನು ಧ್ಯನಮಾಡಬೇಕಾದರೆ ನಾವು ಗುಡಿಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೂ ನೆನೆಯಬಹುದು. ದೇವರನ್ನು ಮನಸ್ಸಿನಿಂದ ಧ್ಯಾನಿಸದೇ ಇರುವವನು ದೇಗುಲದಲ್ಲಿದ್ದೇನು ಪ್ರಯೋಜನ? ಒಟ್ಟಾರೆ ದೇವರನ್ನು ಧ್ಯಾನಿಸ ಬೇಕಾದರೆ ನಮಗೆ ಬೇಕಿರೋದು ದೇಗುಲವಲ್ಲ, ಮಠವಲ್ಲ. ನಮ್ಮ ಮನಸ್ಸು ಅಷ್ಟೆ.

Wednesday 22 April 2009

ಸರ್ವಜ್ಞನೆಂಬುವನು....

ಪುಷ್ಪದತ್ತನನ್ನು ಮನೆಯಿಂದ ಹೊರಕ್ಕೆ ಹಾಕಿದ ಮೇಲೆ, ಅವನು ಅನೇಕ ಗುರುಗಳಿಂದ ವಿದ್ಯಾಭ್ಯಾಸ ಮಾಡಿ ಅಪಾರವಾದ ಜ್ಞಾನವನ್ನು ಸಂಪಾದಿಸುತ್ತಾನೆ. ಆ ಗುರುಗಳಿಂದ ತಿಳಿದದ್ದನ್ನು ಸಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.
ನಂತರ ಸರ್ವಜ್ಞನೆಂಬ ಅಂಕಿತದಿಂದ ಅನೇಕ ವಚನಗಳನ್ನು ತ್ರಿಪದಿ ರೂಪದಲ್ಲಿ ಬರೆಯುತ್ತಾನೆ.

ಈ ವಚನಗಳನ್ನು ಗಮನಿಸಿ:

ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|
ಪರ್ವತವೇ ಆದ ಸರ್ವಜ್ಞ||

- ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಹೇಳಿಕೊಳ್ಳುತ್ತಿಲ್ಲ. ನಾನು ಎಲ್ಲಾ ವಿದ್ವಾಂಸರ ಹತ್ತಿರ ಒಂದೊಂದು ಮಾತನ್ನು ಕಲಿತು ( ಬಹಳಷ್ಟು ಮಂದಿಯಿಂದ ವಿದ್ಯಾಭ್ಯಾಸ ಮಾಡಿಕೊಂಡು) ವಿದ್ಯೆಯ ಪರ್ವತವೇ ಆದೆನು. ಅಂದರೆ ಈತನಿಗಿಂತ ತಿಳಿದವರು ಎಷ್ಟೋ ಜನರಿದ್ದಾರೆ.

ಹೇಳಲರಿಯನು ನಾನು ಹೇಳೆನಲು ಹೇಳಿದೆನು|
ಬಾಳಲೋಚನನ ಶರಣರಾಳಾಗಿ|
ಹೇಳಿದೆನು ನೋಡು ಸರ್ವಜ್ಞ||

- ನನಗೆ ವಚನಗಳನ್ನು ಹೇಳಲು ತಿಳಿದಿಲ್ಲ. ಆದರೆ ಜನರೆಲ್ಲಾ ಬಲವಂತವಾಗಿ ಹೇಳು ಎಂದಿದ್ದರಿಂದ ಶಿವನ ದಾಸಾನುದಾಸನಾಗಿ ನನಗೆ ತಿಳಿದಿದ್ದನ್ನು ಹೇಳಿದೆನು.

Monday 13 April 2009

ಸರ್ವಜ್ಞನ ಕಾಲದ ಬಗ್ಗೆ

ಸರ್ವಜ್ಞನ ಕಾಲದ ಬಗ್ಗೆ ಈಗಿರುವ ಮಾಹಿತಿಗಳ ಪ್ರಕಾರ ಕ್ರಿ.ಶ ೧೬ನೇ ಶತಮಾನ ಅಥವ ೧೭ನೇ ಶತಮಾನದಲ್ಲಿದ್ದ. ಈತನ ಊರು ಧಾರವಾಡ. ಎರಡು ಪುಸ್ತಕಗಳಲ್ಲೂ ಸರಿಯಾದ ಮಾಹಿತಿ ಸಿಗದ ಕಾರಣ, ನಾನು ಅವನ ಕಾಲದ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂತರ್ಜಾಲದಲ್ಲಿ ಕೆಲವು ದಿನಗಳನ್ನು ಕಳೆದೆ. ಹಾಗು ನನಗೆ ಸಿಕ್ಕ ಮಾಹಿತಿಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.

ಈಗಿರುವ ಅಂಶವನ್ನು ಈಗ ನಂಬೋಣ. ಹಾಗಾದರೆ ನನಗೊಂದು ಸಂದೇಹವಿದೆ. ೧೬ನೇ ಶತಮಾನದಲ್ಲಿ ಕರ್ನಾಟದಲ್ಲಿ ಆಳಿದ ರಾಜರ ಮಾಹಿತಿಗಳು ನಿಖರವಾಗಿದೆ, ಆಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಬಗ್ಗೆ ಎಲ್ಲಾ ಗೊತ್ತಿದೆ. ಅದೇ ಕಾಲದಲ್ಲಿದ್ದ ಸರ್ವಜ್ಞನ ಬಗ್ಗೆ ಮಾಹಿತಿವಿಲ್ಲ ಎಂದರೇನರ್ಥ?

ಈತನ ಕಾಲದ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿಯಿಂದ ನಾನು ಪುಟಗಳನ್ನು ತಿರುವುಹಾಕಿದಾಗ ತಿಳಿದ ವಿಷಯಗಳು

೧. ಜೈನ ಧರ್ಮದ ಬಗ್ಗೆ ಹಾಗು ತೀರ್ಥಂಕರರ (ಜಿನ) ಬಗ್ಗೆ ವಚನಗಳು
೨. ಲಿಂಗಾಯತರ ಬಗ್ಗೆ ವಚನಗಳು
೩. ಸಂಗೀತದ ಒಂದು ರಾಗದ ಬಗ್ಗೆ

೧) ಜೈನರ ಬಗ್ಗೆ ನೋಡೋಣ:-

ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು|
ಸರ್ಪನಿಗೆ ಬಾಲವೆರಡಕ್ಕು ಸವಣ ತಾ|
ತಪ್ಪಾಡಿದಂದು ಸರ್ವಜ್ಞ||

-- ಸವಣರು ಸುಳ್ಳನ್ನಾಡಿದರೆ ಉಪ್ಪು ಸಪ್ಪೆಯಾಗುತ್ತದೆ, ಕರ್ಪೂರ ಕಪ್ಪಾಗುತ್ತದೆ ಹಾಗು ಹಾವಿಗೆ ಎರಡು ಬಾಲ ಬರುತ್ತದೆ.

ನಾನು ನಿಘಂಟು ತಾತನನ್ನು ಕೇಳಿದೆ ಸವಣ ಎಂದರೆ ಏನು ಅಂತ. ಆಗ ಅವರು,
ಸವಣ = (ಸಂ. ಶ್ರಮಣ) (ನಾ) ಜೈನ ಸನ್ಯಾಸಿ, ಕ್ಷಪಣಕ ೨ ಕಿವಿ

ನನಗನಿಸಿದ್ದು, ಸರ್ವಜ್ಞ ಈ ರೀತಿಯಾಗಿ ಹೇಳಿದ್ದಾನೆಂದ ಮೇಲೆ, ಆಗ ಸವಣರು ಬದುಕಿರ ಬೇಕು ಹಾಗು ಈತನಿಗೆ ಅವರ ಬಗ್ಗೆ ತಿಳಿದಿರ ಬೇಕು. ಹತ್ತಿರದಿಂದ ಅವರನ್ನು ಕಂಡಿರಲೇ ಬೇಕು.

ಜೈನರು ಕರ್ನಾಟದಲ್ಲೂ ಇದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಶ್ರವಣಬೆಳಗೊಳದಲ್ಲಿ ಗೋಮಟೇಶ್ವರ ಇರೋದೇ ಸಾಕ್ಷಿ. ನನ್ನ ಅನಿಸಿಕೆ ಏನೆಂದರೆ, ಸವಣಕ್ಕೆ ಸಂಸ್ಕೃತ ಪದ "ಶ್ರಮಣ" -> ಇದು ಕನ್ನಡಕ್ಕೆ ಬರುವಾಗ "ಶ್ರವಣ"ವಾಗಿರಬಹುದು. ಬೆಳಗೊಳ ಪದವು ಬಿಳಿ + ಕೊಳ ದಿಂದ ಬಂದಿದೆ. ಶ್ರವಣರಿದ್ದ ಬಿಳಿ ಕೊಳವಿದ್ದ ಊರೇ ಶ್ರವಣಬೆಳಗೊಳ.

ಈ ವಚನ ಗಮನಿಸಿ:

ಮೊಸರು ಇಲ್ಲದ ಊಟ| ಪಸರವಿಲ್ಲದ ಕಟಕ|
ಹಸನವಿಲ್ಲದಳ ರತಿಕೂಟ ಜಿನನ ಬಾಯ್|
ಕಿಸುಕುಳದಂತೆ ಸರ್ವಜ್ಞ||

ಮತ್ತೆ ನಿಘಂಟು ತಾತನನ್ನು ಕೇಳಿದೆ,
ಜಿನ: (ಸಂ) (ನಾ) ೧ ಇಂದ್ರಿಯಗಳನ್ನು ಗೆದ್ದವನು, ಜಿತೇಂದ್ರಿಯ ೨ ಜೈನ ಯಾ ಬೌದ್ಧ ಸನ್ಯಾಸಿ ೩ ಬುದ್ಧ ೪ ವಿಷ್ಣು ೫ ಅರ್ಹಂತ ೬ ಇಪ್ಪತ್ನಾಲ್ಕು ಎಂಬ ಸಂಖ್ಯೆಯ ಸಂಕೇತ

ಜೈನ ಧರ್ಮದಲ್ಲಿ ೨೪ ಸಂಖ್ಯೆ ಏನನ್ನು ಜ್ಞಾಪಿಸುತ್ತದೆ? (೨೪ನೇ ತೀರ್ಥಂಕರ (ಜಿನ)) ಅಂದರೆ ಮಹಾವೀರ. ಮಹಾವೀರನ ಕಾಲ ಕ್ರಿ. ಪೂ. ೬ನೇ ಶತಮಾನ. ಇಲ್ಲಿ ಸರ್ವಜ್ಞ ನೇರವಾಗಿ ಮಹಾವೀರನಿಗೆ ಹೇಳಿರ ಬಹುದಲ್ಲವೆ? ಹಾಗಾಗಿ ಸರ್ವಜ್ಞ ಕ್ರಿ.ಪೂ. ೬ನೇ ಶತಮಾನದವನು ಎನ್ನ ಬಹುದಲ್ಲವೆ?

೨) ಈಗ ಲಿಂಗಾಯತರ ವಿಷಯ ನೋಡೋಣ:-

ಲಿಂಗಾಯತ ಧರ್ಮ ಕೂಡ ಹಳೆಯದೆ. ಇದನ್ನು ಹೆಚ್ಚು ಪ್ರಚಾರ ಮಾಡಿದವರು ಬಸವಣ್ಣ ಹಾಗು ಅವರ ಕಾಲದಲ್ಲಿದ್ದ ಅಲ್ಲಮ ಪ್ರಭು, ಅಕ್ಕಮಹಾದೇವಿ. ಇವರ ಕಾಲ ೧೨ನೇ ಶತಮಾನ. ಈ ಧರ್ಮ ೧೨ನೇ ಶತಮಾನಕ್ಕಿಂತ ಹಿಂದಿನದು. ಇದಕ್ಕೆ ಎರಡು ಸಾಕ್ಷಿಗಳನ್ನು ನೋಡೋಣ.
೧. ಲಿಂಗಾಯತರ ಧರ್ಮ ಗ್ರಂಥ "ಸಿದ್ಧಾಂತ ಶಿಖಾಮಣಿ" ರಚಿತವಾಗಿರೋ ಕಾಲ - ೮ನೇ ಶತಮಾನ
೨. ಲಿಂಗಾಯತರ ಮಠ- ಜಂಗಮವಾದಿ ಮಠವು ಕಾಶಿಯಲ್ಲಿದ್ದು ೬ನೇ ಶತಮಾನದ್ದು ಎಂಬ ದಾಖಲೆ ಇದೆ.
ಇದರಿಂದ ಸರ್ವಜ್ಞನು ಆ ಕಾಲದಲ್ಲೇ ಇದ್ದಿರಬಹುದು ಎಂದು ಹೇಳ ಬಹುದಲ್ಲವೆ?

೩) ಸಂಗೀತದ ರಾಗದ ಕುರಿತಾಗಿ:-

ನಾಟ ರಾಗವು ಲೇಸು| ತೋಟ ಮಲ್ಲಿಗೆ ಲೇಸು|
ಕೂಟವದು ಲೇಸು ಹಿರಿಯರೊಳು ಶಿವನ ಅರಿ|
ದಾಟವೇ ಲೇಸು ಸರ್ವಜ್ಞ||

(ನಾನು refer ಮಾಡುತ್ತಿದ್ದ ಎರಡೂ ಪುಸ್ತಕಗಳಲ್ಲಿ "ನಾಟ ರಾಗ"ದ ವಿಷಯವೇ ಬರೆದಿಲ್ಲ.)

ನಮ್ಮ ಪುರಂದರದಾಸರನ್ನು "ಸಂಗೀತದ ಪಿತಾಮಹ" ಅಂತ ಕರೆಯುವುದು ಬಹುಶಃ ಎಲ್ಲರಿಗೂ ತಿಳಿದಿರುತ್ತದೆ. ಅವರ ಕಾಲ ೧೫ನೇ ಶತಮಾನ. ಹೀಗಿದ್ದರೂ ಸರ್ವಜ್ಞನ ಕಾಲ ೧೫ನೇ ಶತಮಾನ ಎನ್ನಲಾಗುವುದಿಲ್ಲ. ಏಕೆಂದರೆ ಸಂಗೀತದ ಕುರಿತಾದ ಮಾಹಿತಿಗಳು ನಮ್ಮ ಸಾಮವೇದದಲ್ಲೇ ಇತ್ತು.( ಐದು ಸಾವಿರ ವರ್ಷಗಳ ಹಿಂದೆ). ಪುರಂದರ ದಾಸರು ಸಂಗೀತವನ್ನು ಕಲಿಯಲು ಸುಲಭವಾಗಲೆಂದ "Syllabus" ಮಾಡಿದ್ದಾರೆ. ಪುರಂದರ ದಾಸರು ಇದನ್ನು ಕಂಡು ಹಿಡಿದಿಲ್ಲ.
LKG -> ಸ....ಪಾ..........ಪಾ....ಸ...........
UKG -> ಸರಳವರಸೆ,
1st Std -> ತಾರ ಸ್ಥಾಯಿ ಹಾಗು ಮಂದ್ರ ಸ್ಥಾಯಿ
2nd Std -> ಜಂಟಿವರಸೆ ಇತ್ಯಾದಿಗಳು.

ತ್ಯಾಗರಾಜರು ತಮ್ಮ ಪಂಚರತ್ನ ಕೀರ್ತನೆಗಳಲ್ಲಿ ಮೊದಲನೆಯದನ್ನು ನಾಟ ರಾಗದಲ್ಲೇ ಮಾಡಿರುವುದು ಸತ್ಯ. ಅಲ್ಲದೆ ನಾಟ ರಾಗವು ಸಾವಿರ ವರ್ಷಕ್ಕೂ ಹಳೆಯ ರಾಗ ಎನ್ನುವುದಕ್ಕೆ ಮಾಹಿತಿಯಿದೆ. ಸರ್ವಜ್ಞನಿಗೆ ಅಂದಿನವರು ಯಾರೋ ನಾಟ ರಾಗದ ಬಗ್ಗೆ ಹೇಳಿ ಅದನ್ನು ವಚನದಲ್ಲಿ ಬರೆದಿರಬಹುದು. ನಾಟ ರಾಗವು ಶ್ರೇಷ್ಠವಾದ ರಾಗವಾದ್ದರಿಂದ ತ್ಯಾಗರಾಜರು ಆ ರಾಗದಲ್ಲಿ ಕೀರ್ತನೆ ಮಾಡಿದ್ದಾರೆ ಎನ್ನ ಬಹುದು.

ಎಂ.ಎಸ್.ಸುಬ್ಬಲಕ್ಷ್ಮಿಯವರು ಹಾಡಿರುವ ಹಾಡು ಇಲ್ಲಿ ಕೇಳಬಹುದು:ಇಷ್ಟೆಲ್ಲಾ ಸಂಶೋಧನೆ ಮಾಡಿದರೂ ನಿಖರವಾದ ಮಾಹಿತಿ ನನಗೆ ಸಿಕ್ಕಿಲ್ಲ. ಈಗ ನಿಮ್ಮ ಮುಂದೆ ಇಡುತ್ತಿದ್ದೇನೆ. ಚರ್ಚೆಗೆ ಆಹ್ವಾನಿಸುತ್ತಿದ್ದೇನೆ.

--
ಈ ಪೋಸ್ಟ್ ಬರೆದ ಮೇಲೆ, ಶ್ರೀ ಸವಿತೃ ಅವರು, ಒಂದು ವಚನವನ್ನು ಕಾಮೆಂಟ್ ಮಾಡಿದರು. ಅವರು ಕೊಟ್ಟ ಮಾಹಿತಿ ಕಾಮೆಂಟಿನಲ್ಲೂ ಇದೆ. ಇಲ್ಲೂ ಹಾಕುತ್ತೇನೆ.
ಸರ್ವಜ್ಞನು ಬಸವಾದಿ ಶರಣರ ನಂತರದ ಕಾಲದವನು ಅಂತ ತಜ್ಞರ ಅನಿಸಿಕೆ.

೧.ಆತ ಕೆಲವು ಕಡೆ ಶರಣರ ಹೆಸರನ್ನು refer ಮಾಡಿದ್ದಾನೆ.

ಉದಾ.

ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು|
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ

೨. ಶರಣ ಪದ ಸಿದ್ದಾಂತ ಶಿಖಮಣಿಯಲ್ಲಿ / ಶೈವಾಗಮಗಳಲ್ಲಿ ಬಂದಿದ್ದರೂ "ಶರಣರು" ಅನ್ನೋ ಕಾನ್ಸೆಪ್ಟ್ ಬಂದಿದ್ದು ಬಸವಾದಿ ಶರಣರ ನಂತರವೆ. ಅದಕ್ಕೂ ಮುಂಚಿನವರನ್ನು ಪುರಾತನರು ಅಂತ ಸಂಭೋಧಿಸುತ್ತಾರೆ.

ಈ ಮಾಹಿತಿಯಿಂದ ಆತ ಕ್ರಿ.ಪೂ ದವನು ಅನ್ನೋದು ಸುಳ್ಳು. ಬಸವಣ್ಣನ ಸಮಕಾಲೀನ ಅಥವಾ ನಂತರದವನು ಅನ್ನ ಬಹುದು.

ವಂದನೆಗಳು ಸವಿತೃಅವರೆ.

Monday 6 April 2009

ಮನೆಯಿಂದ ಹೊರಗೆ

ತಾ ಎಂದೆನಲ್ಲದೇ | ತಾಯಿನಾನೆಂಬೆನೇ |
ತಾಯಿಯೆಂದಾನು ನುಡಿದೇನು ಪರಸ್ತ್ರೀಯ|
ತಾಯಿಯೆಂದೆಂಬ ಸರ್ವಜ್ಞ||

- ಮಲ್ಲಮ್ಮನನ್ನು "ತಾ" ಎಂದು ಬೇಡುವೆನು ಹೊರತು ಅವಳನ್ನು "ನನ್ನ ತಾಯಿ" ಅಂತ ಕರಿಯೋದಿಲ್ಲ. ಜಗತ್ತಿನಲ್ಲಿಯ ಪರಸ್ತ್ರೀಯರೂ ನನಗೆ ತಾಯೆಂದಿರಾಗಬೇಕು.

ನೂಕಿ ಬಿಟ್ಟರು ಆಗ | ಕಾಕುತನದೊಳು ಬೇಗ|
ಲೋಕದೊಳಗೆಲ್ಲ ಕಂಡದ್ದು ನುಡಿದು ತಾ|
ನೇಕವಾಗಿಹನು ಸರ್ವಜ್ಞ||

- ಮೇಲೆ ಹೇಳಿದಂತ ನಿಜವಾದ ಸಂಗತಿಯನ್ನು ಹೇಳಿದ ಕಾರಣಕ್ಕೆ ನನ್ನನು ಮನೆಯಿಂದ ಹೊರಗೆ ಹಾಕಿದರು. ಆದರೂ ಲೋಕದಲ್ಲಿ ಕಂಡ ಸಂಗತಿಗಳನ್ನು ಹೇಳುತ್ತಾ ಇದ್ದೀನಿ.

ಮೀರಿ ಬೆಳೆಯಲು ತನುವು| ಆರು ಬಣ್ಣವ ನುಡಿಸಿ|
ಮೂರು ರುಚಿದೋರಿ ಮೆರೆಸಿ ತಾ ತನ್ನನ್ನೇ|
ತೋರದೇ ಹೋದ ಸರ್ವಜ್ಞ||

- ಹುಟ್ಟುವುದು, ಇರುವುದು, ಬೆಳೆಯುವುದು, ಬದಲಾಯಿಸುವುದು, ಬಡವನಾಗುವುದು, ಹಾಳಾಗುವುದು ಎಂಬ ಆರು ಬಗೆಯ ವಿಕಾರಗಳನ್ನು ಹೊಂದಿ, ಸತ್ವ, ರಜ ಹಾಗು ತಮ ಗುಣಗಳಿಗೆ ಒಳಗಾದ ನನ್ನ ದೇಹವು ಬೆಳವಣಿಗೆಯನ್ನು ಹೊಂದಿತು.

ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ|
ಚೆನ್ನಾಗಿ ಮನವ ತೆರೆದು ತಾ ಬಿಡದೆ|
ಚನ್ನನಾ ನೆನಹು ಸರ್ವಜ್ಞ||

- ನನಗೆ ಪಂಚೇಂದ್ರಿಯಗಳನ್ನು, ಮನಸನ್ನು ಶಿವ ಕೊಟ್ಟಿದ್ದಾನೆ. ಅಂತಹ ಶಿವನನ್ನು ಮನಸ್ಸನ್ನು ಬೇರೇ ವಿಷಯಗಳ ಕಡೆಗೆ ಹರಿಯಗೊಡದೆ ಸದಾ ನೆನೆಯುತ್ತೇನೆ.

( ಈತ, ದೇವತೆಗಳಲ್ಲಿ ಶಿವನೇ ಶ್ರೇಷ್ಠನೆಂದು ಸಾರುವ ವಚನಗಳನ್ನೇ ಬರೆದಿದ್ದಾನೆ.)